ಪಥ್ಯ -
ಕಟ್ಟುಪಾಡಿಗೆ ಒಳಪಟ್ಟ ಆಹಾರ ಪಾನೀಯ (ಡಯಟ್). ಕಟ್ಟುಪಾಡು ಆಹಾರದ ಒಟ್ಟು ಪರಿಮಾಣಕ್ಕೆ ಅನ್ವಯಿಸಬಹುದು. ಪಥ್ಯವನ್ನು ವ್ಯಕ್ತಿಗೆ ಶಿಕ್ಷೆ ವಿಧಿಸಲೆಂದು ಅಥವಾ ಎನ್ನೇನೋ ಬಲವಂತ ಕಾರಣಕ್ಕಾಗಿ ದುರುದ್ದೇಶದಿಂದ ಹೇರಬಹುದು. ಇಲ್ಲವೆ ರೋಗಚಿಕಿತ್ಸೆ, ಬೆಳವಣಿಗೆ ಮತ್ತು ಆರೈಕೆಗಳಿಗೆ ಅಗತ್ಯವಾದ ಇತರ ಸ್ಥಿತಿಗಳ ಪರಿಗಣನೆಯಿಂದ ಸದುದ್ದೇಶಿತವಾಗಿ ವಿಧಿಸಬಹುದು. ಜ್ಞಾನಾರ್ಜನೆಗಾಗಿ ಇಲ್ಲವೇ ಪ್ರಯೋಗಾರ್ಥವಾಗಿ ಕೂಡ ಪಥ್ಯವನ್ನು ವಿಧಿಸುವುದುಂಟು. ದಿತನಿತ್ಯದ ಅಲ್ಲದೇ ದಿನದಿನವೂ ಹೆಚ್ಚಿನ ವ್ಯತ್ಯಾಸವಿರದ ಆಹಾರವೂ ಪಥ್ಯವೇ.

	ದಿನನಿತ್ಯದ ಕಟ್ಟುಪಾಡಿಗೆ ಒಳಪಟ್ಟ ಆಹಾರದಿಂದ ಸಾಮಾನ್ಯವಾಗಿ ಆರೋಗ್ಯ ಸಂರಕ್ಷಣೆಗೆ ಕುಂದಿರುವುದಿಲ್ಲ. ಆದರೆ ಬಡತನ, ಅಲಭ್ಯತೆ, ಅಜ್ಞಾನ, ಸೊಗಸುಗಾರಿಕೆ, ಖಯಾಲಿ ಇವುಗಳಿಂದ ದಿನಬಳಕೆಯ ಆಹಾರ ಸಂತುಲಿತಾಹಾರವಾಗಿರದೆ ಅಭಾವಜನ್ಯರೋಗಗಳೂ ಉಂಟಾಗುವುದು ಸಾಮಾನ್ಯವೆಂದೇ ಹೇಳಬಹುದು, ಅಪರೂಪವಂತೂ ಅಲ್ಲ. ದಿನಬಳಕೆ ಆಹಾರವಸ್ತು ಸಾಮಾನ್ಯವಾಗಿ ಮನೆಯವರಿಗೆಲ್ಲ ಒಗ್ಗಿಬಂದಿದ್ದರೂ ಒಬ್ಬಿಬ್ಬರಿಗೆ ಒಗ್ಗದೆ ಅವರಿಗೆ ಅಪಥ್ಯವಾಗಿ ರೋಗಕ್ಕೆ ಎಡ ಆಗುವುದೂ ಉಂಟು. ಆಜನ್ಮವಾಗಿ ಕೆಲವರಿಗೆ ಕೆಲವು ಆಹಾರಗಳು ಒಗ್ಗವು. ಆದ್ದರಿಂದ ಯಾವುದೇ ಕಟ್ಟುಪಾಡಿನಂತೆ ವ್ಯವಸ್ಥಿತವಾದ ಆಹಾರ ಸಂದರ್ಭಾನುಸಾರ ಆರೋಗ್ಯಕರವಾಗಿ ಇರಬಹುದು ಇಲ್ಲವೇ ಅನಾರೋಗ್ಯಕರವಾಗಿ ಇರಬಹುದು. ಆದರೆ ನಮ್ಮಲಲ್ಲಿ ಸಾಮಾನ್ಯವಾಗಿ ಇರುವ ಅಭಿಪ್ರಾಯದಂತೆ ರೋಗಕಾಲದಲ್ಲಿ ಮತ್ತು ರೋಗದಿಂದ ಚೇತರಿಸಿಕೊಳ್ಳುತ್ತಿರುವ ಕಾಲದಲ್ಲಿ ಆರೋಗ್ಯ ಇನ್ನಷ್ಟು ಕೆಡದಂತೆ ನಿಯಮಿತವಾದ ಆಹಾರ ಪಾನೀಯಗಳು ಪಥ್ಯವೆಂದೂ ಆಹಾರ ಪಾನೀಯಗಳಿಂದ ಆರೋಗ್ಯ ಕೆಡುವುದೂ ರೋಗ ಪ್ರಬಲಿಸುವುದೂ ಕಂಡುಬಂದರೆ ಅಂಥವು ಅಪಥ್ಯವೆಂದೂ ಅರ್ಥಮಾಡುವುದಿದೆ. ಅಂದರೆ ಜನಾಭಿಪ್ರಾಯದಂತೆ ಪಥ್ಯವೆಂದರೆ ಯಾವ ಕಾಲದಲ್ಲೂ ಮುಖ್ಯವಾಗಿ ರೋಗಕಾಲದಲ್ಲಿ, ದೇಹದ ಯೋಗಕ್ಷೇಮಕ್ಕೆ ಅನುಕೂಲವಾದ ದೇಹಕ್ಕೆ ಒಗ್ಗುವ ಆಹಾರ ಪಾನೀಯಗಳು. ಅದೇ ಕಾಲದಲ್ಲಿ ಅನನುಕೂಲವಾದ ಹಾಗೂ ದೇಹಕ್ಕೆ ಒಗ್ಗದ ಆಹಾರ ಪಾನೀಯಗಳು ಅಪಥ್ಯ. ಇದು ಎಷ್ಟ ಮಟ್ಟಿಗೆ ಜನರ ಮನಸ್ಸನಲ್ಲಿ ಬೇರೂರಿದೆ ಎಂದರೆ ತೀರ ಸಾಮಾನ್ಯವಾದ ಜ್ವರ ಕೆಮ್ಮು ನೆಗಡಿ ಇತ್ಯಾದಿಗಳನ್ನು ಅನುಭವಿಸುವವರೂ ಪಥ್ಯ ಏನು ಎಂಬುದನ್ನು ಗಣನೆಗೆ ತೆಗೆದುಕೊಳ್ಳುವುದೂ ವೈದ್ಯರಲ್ಲಿ ಈ ವಿಷಯವಾಗಿ ಸಲಹೆಕೇಳುವುದೂ ಇದೆ. ಅಂದರೆ ರೋಗಿ ಚಿಕಿತ್ಸಾಕಾಲದಲ್ಲಿ ಯಾವ ಆಹಾರ ಪಾನೀಯಗಳನ್ನು ಅಗತ್ಯವಾಗಿ ತ್ಯಜಿಸಬೇಕೆಂದು ತಿಳಿಯಬಯಸುವುದೇ ಸಾಮಾನ್ಯ ರೂಢಿ. ಅಗತ್ಯವಾಗಿ ಸೇವಿಸಬೇಕಾದ ಆಹಾರಪಾನೀಯಗಳೂ ಇರಬಹುದು ಎಂಬ ವಿಷಯ ರೋಗಿಯ ಮನಸ್ಸಿನಲ್ಲಿ ಇರುವುದಿಲ್ಲ. ಪಾಶ್ಚಾತ್ಯ ವೈದ್ಯವಿಜ್ಞಾನದಲ್ಲಿ ಹೀಗೆ ಪಥ್ಯ ಅಥವಾ ಅಪಥ್ಯ ಎಂದು ಸಾಮಾನ್ಯ ರೊಗಸಂದರ್ಭಗಳಲ್ಲಿ ಪರಿಗಣಿಸುವುದು ಇಲ್ಲವೆಂದೇ ಹೇಳಬೇಕು. ಪಾಶ್ಚಾತ್ಯ ವೈದ್ಯರೀತ್ಯ ಚಿಕಿತ್ಸಿಸಲ್ಪಡುತ್ತಿರುವ ರೋಗಿ ಸಾಮಾನ್ಯ ಜ್ವರ ಕೆಮ್ಮು ನೆಗಡಿ ಇಂಥ ಸಂದರ್ಭಗಳಲ್ಲಿ ಬಾಯಿರುಚಿ ಕೆಟ್ಟು ಆಸಕ್ತಿ ಕಳೆದುಕೊಂಡಿರುವುದರಿಂದ ಮಾಮೂಲು ಆಹಾರಪದಾರ್ಥಗಳನ್ನು ತೆಗೆದುಕೊಳ್ಳುವುದಿಲ್ಲ ಅಷ್ಟೆ. ವೈದ್ಯನ ಆದೇಶದಂತೆ ಅಲ್ಲ. ಆದರೆ ದೈಹಿಕ ಪ್ರಕೃತಿ ಕೆಟ್ಟು ರೋಗ ಉಂಟಾದಾಗ (ಕಾನಸ್ಟಿಟ್ಯೂಷನಲ್ ಇಲ್ ನೆಸ್) ರುಚಿ ಕೆಡುವುದರ ಜೊತೆಗೆ ಜೀರ್ಣಾಂಗಗಳ ಕ್ರಿಯೆಯೂ ಮಂದವಾಗಿರುವುದರಿಂದ, ಆವಾಗಲೆಲ್ಲ ಸುಲಭವಾಗಿ ಜೀರ್ಣವಾಗಬಲ್ಲ ಆಹಾರಗಳನ್ನೇ ವಿಧಿಸುವುದು ಉಂಟು. ಇದು ವಿನಾ ಪಾಶ್ಚಾತ್ಯವೈದ್ಯರು ವಿಶೇಷ ರೋಗಗಳಲ್ಲಿ ಪಥ್ಯವನ್ನು ಹೇಳುತ್ತಾರೆ ಅಷ್ಟೆ.

	ಆರೋಗ್ಯನಾಶದಿಂದ ಉದ್ಭವಿಸುವ ರೋಗಗಳನ್ನು ಬಿಟ್ಟರೆ, ಇಲ್ಲವೆ ಆಹಾರ ಪಾನೀಯಗಳಿಂದ ಅನಾರೋಗ್ಯ ಉಂಟಾಗುವ ಸಂದರ್ಭಗಳನ್ನು ಬಿಟ್ಟರೆ ಬೇರೆ ಸಂದರ್ಭಗಳಲ್ಲಿ ತೆಗೆದುಕೊಳ್ಳಬಹುದಾದ ನಿರ್ದೇಶಿತ ಆಹಾರಕ್ಕೆ ಸಾಮಾನ್ಯ ಪಥ್ಯ ಅಥವಾ ಇಚ್ಛಾಪಥ್ಯವೆನ್ನಬಹುದು. ಬಾಲ್ಯಾವಸ್ಥೆ, ಮೈನೆರೆಯುವಿಕೆ. ಗರ್ಭಾವಸ್ಥೆ, ವಾರ್ಧಿಕ್ಯ ಮುಂತಾದ ಜೀವನದ ವಿಶೇಷ ಹಂತಗಳಲ್ಲಿ ವಿಶೇಷವಾದ ಆಹಾರಪಾನೀಯಗಳನ್ನು ವಿಧಿಸುವುದು ಉಂಟು. ಆದರೆ ಇವಕ್ಕೆ ಪಥ್ಯವೆಂದು ಗಣಿಸುವ ರೂಢಿ ಇಲ್ಲ. ಸಾಮಾನ್ಯ ಆಚರಣೆಯಲ್ಲಿರುವ ಕೆಲವು ಪಥ್ಯಗಳನ್ನು ಕೆಳಗೆ ವಿವರಿಸಿದೆ.

ದ್ರವಾಹಾರಪಥ್ಯ : ಪ್ರಬಲ ಜ್ವರವಿರುವಾಗ ಮತ್ತು ಜೀರ್ಣನಾಳದ ಯಾವುದೇ ಭಾಗವನ್ನು ಶಸ್ತ್ರಕ್ರಿಯೆಗೆ ಒಳಪಡಿಸಿದಾಗ ಈ ಪಥ್ಯವನ್ನು ವಿಧಿಸುತ್ತಾರೆ. ಸೇವಿಸಿದ ವಸ್ತು ಪ್ರಾರಂಭ ಘಟ್ಟದಲ್ಲಿಯೇ ಜೀರ್ಣನಾಳದಲ್ಲಿ ನಿಶ್ಶೇಷವಾಗಿ ಹೀರಲ್ಪಟ್ಟು ಅಗತ್ಯವಾದ ಜಲಾಂಶ ಮತ್ತು ಖನಿಜವಸ್ತುಗಳನ್ನು ಒದಗಿಸುತ್ತದೆ. ಸಾಮಾನ್ಯವಾಗಿ ಅದರಲ್ಲಿ ಪ್ರೋಟೀನ್ ಮತ್ತು ಮೇದಸ್ಸು ಘಟಕಗಳು ಅತ್ಯಲ್ಪ. ಶೂನ್ಯವೆಂದೇ ಹೇಳಬಹುದು. ಹಾಲು ಹಾಕದ ಕಾಫಿ ಚಹಾಗಳು, ಶರಬತ್ತು, ಸೋಸಿ ಶುದ್ಧಮಾಡಿದ ಹಣ್ಣು ರಸಗಳು ಇತ್ಯಾದಿ ಈಗ ಪಥ್ಯ. ಕ್ರಮೇಣ ಪ್ರೊಟೀನ್ ಮತ್ತು ಮೇದಸ್ಸಿನ ಘಟಕಗಳು ಇರುವ ದ್ರವವಸ್ತುಗಳನ್ನು ಕೊಡಲಾಗುತ್ತದೆ. ಉದಾಹರಣೆಗೆ ವ್ಹೇ(ಹಾಲೊಡೆಸಿ ತೆಗೆದ ದ್ರವ), ನೀರು ಮಜ್ಜಿಗೆ, ಸೋಸಿದ ಹಣ್ಣು ರಸ, ಅನಂತರ ಹಾಲು ಗಂಜಿ, ಕಡೆದ ಮೊಸರು ಒಡೆದು ದ್ರವೀಕರಿಸಿದ ಮೊಟ್ಟೆ ಇತ್ಯಾದಿ. ಇವುಗಳಲ್ಲಿ ಜೀರ್ಣವಾಗಲಾರದ ಹಾಗೂ ಚರಟದಂತೆ ಉಳಿಯಬಹುದಾದ ಅಂಶಗಳು ಇಲ್ಲದಿರುವುದನ್ನು ಗಮನಿಸಬೇಕು.

	ಮಿದು ಆಹಾರ ಪಥ್ಯ : ತಿಳಿಸಾರು, ಹಾಲು, ಮಜ್ಜಿಗೆ ಇತ್ಯಾದಿಗಳೊಡನೆ ಚೆನ್ನಾಗಿ ಕಿವುಚಿದ ಮೆಡ್ಡೆ ಅನ್ನ, ಬ್ರೆಡ್ಡಿನ ಮೃದುಭಾಗ, ಇಡ್ಲಿ, ಬೇಯಿಸಿದ ಮೊಟ್ಟೆ ಇತ್ಯಾದಿ, ಮಿದುವಾಗಿ ಬೇಯಿಸಿಸ ಸೊಪ್ಪು ಹಾಗೂ ಆಲೂಗೆಡ್ಡೆ ಇವು ರೋಗದಿಂದ ಗುಣವಾಗುತ್ತಿರುವ ವ್ಯಕ್ತಿಗೆ ವಿಧಿಸುವ ಆಹಾರ. ಈ ಆಹಾರದಲ್ಲಿ ಜೀರ್ಣವಾಗದ ಸೆಲ್ಯುಲೋಸ್ ಮುಂತಾದ ವಸ್ತುಗಳು ಅಷ್ಟಿಷ್ಟು ಇರುತ್ತವೆ. ಇವು ಜೀರ್ಣನಾಳದಲ್ಲಿ ಶೇಷವಸ್ತುಗಳಾಗಿ ಉಳಿದು ಮಲರೂಪವನ್ನು ತಾಳುತ್ತವೆ. ಜೀರ್ಣನಾಳದ ಚಲನೆಯನ್ನು ಪ್ರಚೋದಿಸುವುದು ಈ ಪಥ್ಯದ ಉದ್ದೇಶ. ಇದು ರೋಗ ವಿಮುಕ್ತನಾದ ವ್ಯಕ್ತಿ ಇಚ್ಛಾಪಥ್ಯಕ್ಕೆ ಹಿಂತಿರುಗಲು ಅನುಕೂಲ ಮಾಡುತ್ತದೆ. ಅನ್ನನಾಳದಲ್ಲಿ ಎಲ್ಲಾದರೂ ಹುಣ್ಣು ಇರುವ ರೋಗಿಗಳಿಗೂ ಇದು ಪಥ್ಯ. ವ್ಯಕ್ತಿ ಬೇಗ ಸಶಕ್ತನಾಗಿ ಚೇತರಿಸಿಕೊಳ್ಳವಂತೆ ಈ ಪಥ್ಯದಲ್ಲಿ ಐಸ್ಕ್ರೀಮ್, ಸಂಘನಿತ ಹಾಲು, ಮಾಂಸದ ಎಸರು ಇತ್ಯಾದಿಗಳನ್ನು ಸೇರಿಸುವುದುಂಟು. 

	ಆಂಶಿಕ ಮಿತಿಗೆ ಒಳಪಟ್ಟ ಪಥ್ಯಗಳು : (i) ಮಧುಮೇಹದಿಂದ (ಡಯಾಬಿಟಿಸ್) ನರಳುತ್ತಿರುವವರ ರಕ್ತದಲ್ಲಿ ಗ್ಲೂಕೋಸ್ ಮಟ್ಟ ಸಹಜಕ್ಕಿಂತ ಹೆಚ್ಚಾಗಿಯೇ ಇದ್ದು ತೊಂದರೆಗಳಿಗೆ ಕಾರಣವಾಗುವುದರಿಂದ ಅದನ್ನು ಮಿತಗೊಳಿಸುವುದು ಅಗತ್ಯ. ಆದ್ದರಿಂದ ಸಕ್ಕರೆ ಪಿಷ್ಟ ಅಂಶಗಳು ಹೆಚ್ಚಾಗಿರುವ ಪದಾರ್ಥಗಳನ್ನು ಮಿತಗೊಳಿಸಿ, ಆದರೆ ದೇಹದ ಇತರ ಪೋಷಕಾವಶ್ಯಕತೆಗಳಿಗೆ ಕುಂದುಬಾರದಂತೆ, ಪಥ್ಯವನ್ನು ವಿಧಿಸಿ ತಕ್ಕದ್ದು. ರಾಗಿಹಿಟ್ಟು, ಜೋಳದರೊಟ್ಟಿ, ಅನ್ನ ಬ್ರೆಡ್ ಇತ್ಯಾದಿಗಳನ್ನು ಕಡಿಮೆ ಮಾಡಬೇಕಾದುದು ಒಳ್ಳೆಯದು ಎನ್ನಿಸಿದರೂ ವಸ್ತತಃ ಇದು ಸಾಧ್ಯವಲ್ಲದ್ದರಿಂದ ಅವುಗಳಲ್ಲೆಲ್ಲ ಕಡಿಮೆ ಕೆಡುಕನ್ನು ಉಂಟುಮಾಡಬಲ್ಲ ರಾಗಿಹಿಟ್ಟು, ಗೋಧಿ, ಅನ್ನ ಇವನ್ನು ಬಳಸಬೇಕಾಗಿದೆ. ಸೇವಿಸುವ ವಸ್ತುಗಳಲ್ಲಿ ಬೆಲ್ಲ ಸಕ್ಕರೆ, ಜೇನುತುಪ್ಪ ಇವುಗಳ ಬಳಕೆಯನ್ನು ವರ್ಜಿಸಿ, ಸಿಹಿಗೆ ಅಗತ್ಯವಾದಷ್ಟು ಅಲ್ಪಮೊತ್ತದಲ್ಲಿ ಮಾತ್ರ ಸೈಕ್ಲೊಮೇಟ್ ಮುಂತಾದ ಕೃತಕವಸ್ತಗಳನ್ನು ಬಳಸಬಹುದು.

 	(ii) ಹೃದ್ರೋಗವಿರುವವರಲ್ಲಿ ಮತ್ತು ರಕ್ತದೊತ್ತqದÀ ಆಧಿಕ್ಯದಿಂದ ನರಳುತ್ತಿರುವವರಲ್ಲಿ ಹೃದಯ ರೇಚಿಸುವ ರಕ್ತದ ಘನ ಗಾತ್ರವನ್ನು ಮಿತಗೊಳಿಸುವದರಿಂದ ಹೃದಯಕ್ಕೆ ಶ್ರಮ ಕಡಿಮೆ ಆಗುತ್ತದೆ ಮತ್ತು ರಕ್ತದೊತ್ತಡವೂ ಕಡಿಮೆ ಆಗುತ್ತದೆ. ಹೀಗೆ ಮಾಡಲು ಅಂಥ ರೋಗಿಗಳು ಪಾನೀಯಗಳನ್ನು ಕಡಿಮೆ ತೆಗೆದುಕೊಳ್ಳವುದರ ಜೊತೆಗೆ ಆಹಾರದಲ್ಲಿ ಉಪ್ಪನ್ನು ಆದಷ್ಟು ಕಡಿಮೆ ಸೇವಿಸುವುದು ಒಳ್ಳೆಯದು ಎನ್ನಿಸಿದೆ. ಊಟದಲ್ಲಿ ಮೇಲುಪ್ಪು, ಉಪ್ಪಿನಕಾಯಿ ಬಾಳಕಗಳನ್ನು ವರ್ಜಿಸುವುದಲ್ಲದೆ ಆಹಾರ ತಯಾರಿಕೆಯಲ್ಲೂ ಮಾಮೂಲಿಗಿಂತ ಕಡಿಮೆ ಉಪ್ಪನ್ನು ಬಳಸಬೇಕು. ಹೃದ್ರೋಗವಿರುವವರು ಮೇದಸ್ಸಿನ ಅಂಶ ಕಡಿಮೆ ಇರುವ ಪಥ್ಯದಲ್ಲಿ ಇರುವುದೂ ಅಗತ್ಯ. ಇಂಥವರ ಹೃದಯದ ಹಾಗೂ ಅಪಧಮನಿಗಳ ಭಿತ್ತಿಯಲ್ಲಿ ಕೊಲೆಸ್ಟಿರಾಲ್ ಎಂಬ ರಾಸಾಯನಿಕ ಘಟಕದಿಂದಾದ ಘನಾಕೃತಿಗಳು ಮೈದೋರಿ ರೋಗಲP್ಪ್ಷಣಗಳಿಗೆ ಕಾರಣವಾಗಿರುತ್ತವಾದ್ದರಿಂದ ಅವರ ರಕ್ತದಲ್ಲಿ ಕೊಲೆಸ್ಟಿರಾಲ್ ಮತ್ತು ಸಂಬಂಧಿಸಿದಂಥ ಮೇದಸ್ಸು ಘಟಕಗಳನ್ನು ಕಡಿಮೆ ಮಟ್ಟದಲ್ಲಿ ಇಟ್ಟಿರುವುದು ಒಳ್ಳೆಯದು ಇನ್ನಿಸಿ ಮೇಲಿನ ಪಥ್ಯವನ್ನು ವಿಧಿಸಲಾಗಿದೆ.

 	ಮೇದಸ್ಸಿನ ಜೀರ್ಣ ಮತ್ತು ರಕ್ತಗತ ಪ್ರಕ್ರಿಯೆಗಳಿಗಾಗಿ ಕರುಳಿನಲ್ಲಿ ಪಿತ್ತರಸ ಇರುವುದು ಅಗತ್ಯ. ಪಿತ್ತಜನಕಾಂಗದ ರೋಗದಿಂದ ಇಲ್ಲವೇ ಅದರ ನಾಳಗಳಲ್ಲಿಯ ಅಡಚಣೆಗಳಿಂದ ಕರುಳಿನಲ್ಲಿ ಪಿತ್ತರಸದ ಅಭಾವ ಉಂಟಾದಾಗ (ಇದೇ ವೇಳೆ ಸಾಮಾನ್ಯವಾಗಿ ಅರಿಶಿನ ಕಾಮಾಲೆ, ಜಾಂಡೀಸ್ ಕೂಡ ಕಂಡುಬರುತ್ತವೆ) ಮೇದಸ್ಸಿನ ಪಚನಕ್ಕೆ ಧಕ್ಕೆಯಾಗಿ ಭೇದಿ ಮತ್ತು ಇತರ ತೊಂದರೆಗಳು ಉಂಟಾಗುತ್ತವೆ. ಆದ್ದರಿಂದ ಈ ಸಂದರ್ಭಗಳಲ್ಲಿ ಮೇದಸ್ಸಿನ ಘಟಕಗಳು ಇಲ್ಲದಿರುವÀ ಅಥವಾ ಅತ್ಯಲ್ಪವಾಗಿರುವ ಪಥ್ಯದಲ್ಲಿ ಇರಬೇಕಾಗುತ್ತದೆ. ಹಾಲು, ಮೊಸರು, ಎಣ್ಣೆ, ಬೆಣ್ಣೆ, ತುಪ್ಪಗಳು, ಕರಿದ ಪದಾರ್ಥಗಳು ಇವೆಲ್ಲವೂ ಇಂಥ ವೇಳೆ ವಜ್ರ್ಯ. ಹಾಲೊಡೆಸಿದ ನೀರು, ಕಡಿಮೆ ಬೆಣ್ಣೆ ತೆಗೆದ ಮಜ್ಜಿಗೆ ಇವನ್ನು ಧಾರಾಳವಾಗಿ ಬಳಸಬಹುದು. ಮೇದೋಜೀರಕಾಂಗದ ರೋಗದಿಂದಾಗಿ ಭೇದಿ ಆಗುತ್ತಿರುವಾಗಲೂ ಮೇಲಿನ ಪಥ್ಯ ಅಗತ್ಯ. 

 	(iii) ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ಹೆಚ್ಚಾಗಿ ಭೇದಿಕಾರಕವಾಗುವವು ಸಿಲಿಯಕ್ ಮತ್ತು ಸ್ಟ್ರೂ ರೋಗಗಳು. ಗೋಧಿಯ ಬನಿ ಅಥವಾ ಅಂಟಿಗೆ ಕಾರಣವಾದ ಗ್ಲೂಟೆನ್ ಎಂಬ ಪ್ರೋಟೀನ್ ಅಂಶ ಪ್ರಕೃತ ವ್ಯಕ್ತಿಯ ದೇಹಕ್ಕೆ ಒಗ್ಗದಿರುವುದೇ ಇದರ ಕಾರಣ. ಆದ್ದರಿಂದ ಗೋಧಿ, ರವೆ, ಗೋಧಿ ಹಿಟ್ಟು, ಬುಸ ಇತ್ಯಾದಿ ಇವರಿಗೆ ಅಪಥ್ಯ. ಇವು ಅಗತ್ಯವಾಗಿ ತ್ಯಜಿಸಬೇಕಾದ ವಸ್ತುಗಳು. ಇದೇ ಪ್ರೋಟೀನ್ ವಸ್ತು ಇರುವ ರೈ ಎಂಬ ದವಸವೂ ಈ ರೋಗಿಗಳಿಗೆ ಅಪಥ್ಯ. ಅಕಸ್ಮಾತ್ತಾಗಿ ಕಿಂಚಿತ್ತಾಗಿಯಾದರೂ ಗ್ಲೂಟೆನ್ ಇರುವ ವಸ್ತುವನ್ನು ಸೇವಿಸಿದರೆ ರೋಗ ಮರುಕಳಿಸುವುದು ಶತಸ್ಸಿದ್ಧ. ಪಥ್ಯದಲ್ಲಿ ಇರಬೇಕಾದ ಅಗತ್ಯವನ್ನು ಇದು ಎತ್ತಿ ತೋರಿಸುವಂಥ ಒಂದು ಸಂದರ್ಭ.

(iv) ಮೇಲುನೋಟಕ್ಕೆ ನಿರೋಗಿಗಳೆಂದೇ ಕಾಣಿಸಿದರೂ ಅಂಥವರಲ್ಲಿ ಯಾವುದೋ ಆಹಾರಾಂಶ ದೇಹದಲ್ಲಿ ಸಹಜವಾದ ರಾಸಾಯನಿಕ ಮಾರ್ಪಾಡಿಗೆ ಒಳಗಾಗದೆ ವಿಷ ಪದಾರ್ಥಗಳು ಉತ್ಪನ್ನವಾಗಿ ರೋಗಸ್ತಿತಿ ಉಂಟಾಗುವ ಸನ್ನಿವೇಶಗಳು ಸುಮಾರು 1910ರಿಂದ ಈಚೆಗೆ ಅನೇಕವಾಗಿ ಕಂಡುಬಂದಿವೆ. ಕೆಡುಕನ್ನು ಉಂಟು ಮಾಡುವ ಅಂಶವಿರುವ ಆಹಾರವನ್ನು ಇಂಥವರು ತ್ಯಜಿಸಬೇಕಾದದು ವೇದ್ಯ. ಉದಾಹರಣೆಗೆ ಗ್ಯಾಲಾಕ್ಟೋಸೀಮಿಯ ಎಂಬ ರೋಗಸ್ಥಿತಿ ಒಂದು. ಇದರಲ್ಲಿ ಮಕ್ಕಳು ಹಾಲುಂಡು ಜೀರ್ಣಿಸಿಕೊಳ್ಳುವಾಗ ಅದರಿಂದ ಬಿಡುಗಡೆ ಆದ ಗ್ಯಾಲಕ್ಟೋಸ್ ಸಕ್ಕರೆ ಮಾಮೂಲಾಗಿ ಗ್ಲೂಕೋಸ್ ಆಗಿ ¥ರಿವರ್ತಿತವಾಗಬೇಕಾದದ್ದು ಹಾಗಾಗುವುದಿಲ್ಲ. ಬದಲು ದೇಹದಲ್ಲಿ ಶೇಖರಗೊಂಡು ನಾನಾ ರೀತಿಯ ತೊಂದರೆ ಬುದ್ಧಿಮಾಂದ್ಯ ವಗೈರೆಗಳಿಗೆ ಕಾರಣವಾಗುತ್ತದೆ. ಇಂಥ ಮಕ್ಕಳಿಗೆ ಹಾಲು ಮತ್ತು ಹಾಲಿನ ಸಕ್ಕರೆ ಲ್ಯಾಕ್ಟೋಸ್ ಇರುವ ವಸ್ತಗಳು ಹಾಗೂ ಸ್ವತಃ ಗ್ಯಾಲಕ್ಟೋಸ್, ಇವೆಲ್ಲ ಅಪಥ್ಯ ಹಾಗೂ ತ್ಯಾಜ್ಯವಸ್ತುಗಳು. ಹಾಗೆಯೇ ಫಿನೈಲ್ ಕೀಟೋನ್ ಯೂರಿಯ ಎಂಬುದು ಇನ್ನೊಂದು ರೋಗಪರಿಸ್ಥಿತಿ. ಬುದ್ಧಿಮಾಂದ್ಯ ವಿಕಲ್ಪಗಳ ಇದರಲ್ಲಿಯ ಮುಖ್ಯ ಲಕ್ಷಣ. ಈ ರೋಗಸ್ಥಿತಿಯಲ್ಲಿ ವ್ಯಕ್ತಿ ಫೆನೈಲ್ ಅಲನಿನ್ ಎಂಬ ಅಮಿನೋ ಆಮ್ಲವನ್ನು ವಿಷವಾಗಿ ¥ರಿವರ್ತಿಸುವುದು ಇದೆ. ಇದೇ ರೊಗಕ್ಕೆ ಕಾರಣ. ಆದ್ದರಿಂದ ವ್ಯಕ್ತಿ ಫಿನೈಲ್ ಅಲನಿನ್ ಇರುವ ಪ್ರೋಟೀನನ್ನು (ಸ್ವತಃ ಫಿನೈಲ್ ಅಲನಿನ್ನನ್ನು ಯಾರೂ ಸೇವಿಸುವುದಿಲ್ಲ) ತೆಗೆದುಕೊಳ್ಳಬಾರದು. ಇಂಥ ರೋಗಗಳು 400ರಿಂದ 500ಕ್ಕೂ ಮೇಲ್ಪಟ್ಟು ಆವಿಷ್ಕರಿಸಲ್ಪಟ್ಟಿವೆ. ಪ್ರತಿ ಸಂದರ್ಭದಲ್ಲಿಯೂ ಅಪಥ್ಯವೆಂದು ತಿಳಿದ ವಸ್ತುವನ್ನು ವರ್ಜಿಸಬೇಕಾಗುತ್ತದೆ.

 	ಮೇಲೆ ಹೇಳಿದ ರೀತಿ ಅಪಥ್ಯವಾಗದಂತೆ ಆಹಾರದಿಂದ ತ್ಯಾಜ್ಯಾಂಶಗಳನ್ನು ವರ್ಜಿಸುವುದು ಒಂದು ಬಗೆಯಾದರೆ ತಮ್ಮ ಕೊರತೆಯಿಂದ ಅನಾರೋಗ್ಯವನ್ನು ಉಂಟು ಮಾಡುವ ಆಹಾರದ ಅಗತ್ಯಾಂಶಗಳನ್ನು ಸೇರಿಸಿಕೊಳ್ಳವುದು ಅಷ್ಟೇ ಮುಖ್ಯವಾದ ಇನ್ನೊಂದು ಬಗೆ. ಪಥ್ಯದಲ್ಲಿ ಈ ಅಗತ್ಯಾಂಶಗಳನ್ನು ಗಮನದಲ್ಲಿ ಇಟ್ಟೇ ತೀರಬೇಕು. ಸ್ವಾಭಾವಿಕವಾಗಿಯೇ ಈ ವಿಷಯವಾಗಿ ಜೀವಸತ್ತ್ವಗಳು ಎಲ್ಲರ ಜ್ಞಾಪಕಕ್ಕೂ ಬರುತ್ತವೆ. ಇವುಗಳ ಕೊರತೆಯಿಂದ ಅನಾರೋಗ್ಯ ಮಾತ್ರವಲ್ಲದೆ ಮಾರಕರೋಗಗಳೇ ಉಂಟಾಗಬಹುದಾದ್ದರಿಂದ ಪಥ್ಯದಲ್ಲಿ ಇವು ತಕ್ಕ ಪರಿಮಾಣದಲ್ಲಿ ಅಗತ್ಯಾಂಶಗಳಾಗಿಯೇ ಇರಬೇಕು. ಇನ್ನೂ ಅನೇಕ ಅಂಶಗಳು ಮುಖ್ಯವಾಗಿ ಕಬ್ಬಿಣ, ಅಯೋಡಿನ್, ಕ್ಯಾಲ್ಸಿಯಮ್-ಇವೂ ಪಥ್ಯದಲ್ಲಿ ಗಣಿಸಬೇಕಾದ ಅಂಶಗಳು. ಕಬ್ಬಿಣದ ಕೊರತೆಯಿಂದ ರಕ್ತವರ್ಣಕದ ಕೊರತೆರೋಗ (ಅನಿಮಿಯ) ಉಂಟಾಗುತ್ತದೆ. ಇದನ್ನು ನಿವಾರಿಸಲು ಅಡುಗೆಗಾಗಿ ಚಾಕು, ಈಳಿಗೆಮಣೆÉ ಇತ್ಯಾದಿಗಳನ್ನು ಬಳಸುವುದಲ್ಲದೆ ಕಬ್ಬಿಣದ ಅಂಶ ಹೆಚ್ಚಾಗಿರುವ ಸೊಪ್ಪು ಮುಂತಾದ ತರಕಾರಿಗಳನ್ನು ತಿನ್ನಬೇಕು. ಅಯೋಡಿನಿನ ಕೊರತೆಯಿಂದ ಕ್ರೆಟಿನಿಸಮ್ ಮತ್ತು ಮಿಕ್ಸಿಡೀಮ ಎಂಬ ರೋಗಗಳು ಉಂಟಾಗುತ್ತವೆ. ಇದನ್ನು ನಿವಾರಿಸಲು ಅಡುಗೆಗೂ ಮೇಲುಪಯೋಗಕ್ಕೂ ತಕ್ಕ ಮೊತ್ತದಲ್ಲಿ ಪೊಟ್ಯಾಸಿಯಿಮ್ ಅಯೋಡೈಡ್ ಸೇರಿಸಿದ ಉಪ್ಪನ್ನು ಬಳಸಬೇಕು. ಮಕ್ಕಳಲ್ಲಿ ಪ್ರೋಟೀನ್ ಕೊರತೆಯಿಂದ ಕ್ವಾಷಿಯೋರ್ಕರ್ ಎಂಬ ರೊಗ ಉಂಟಾಗುತ್ತದೆ. ಇದರ ನಿವಾರಣೆಗಾಗಿ ಅವರು ಪ್ರೊಟೀನ್ ಅಂಶ ಹೆಚ್ಚಾಗಿರುವ ಹಾಲು, ಮೊಂಟೆ, ಮೀನು, ಮಾಂಸ, ಮುಂತಾದವನ್ನು ಹೆಚ್ಚಾಗಿ ಸೇವಿಸಬೇಕು. 					(ಎಸ್.ಆರ್.ಆರ್.)

	ಆಯುರ್ವೇದದಲ್ಲಿ: ರೋಗಾವಸ್ಥೆಯಿಲ್ಲಿಯೂ ನಿರೋಗಾವಸ್ಥೆಯಲ್ಲಿಯೂ ಮನಸ್ಸಿಗೆ ಹಾಗೂ ಶರೀರಕ್ಕೆ ಹಿತವನ್ನುಂಟು ಮಾಡುವುದನ್ನು ಸೇವಿಸುವುದೆಲ್ಲವೂ ಪಥ್ಯವೆನಿಸುತ್ತದ. ಅಹಿತಮಾಡುವುದೆಲ್ಲವೂ ಅಪಥ್ಯವೇ. ಸಾಮಾನ್ಯವಾಗಿ ಪಥ್ಯವಾಗಿರುವುದೂ ಕೆಲವೊಮ್ಮೆ ಮಾತ್ರಾ (ಡೋಸ್ಭೆಜ್) ಕಾಲ, ಕ್ರ್ರಿಯಾಭೂಮಿ, ದೇಹ, ದೋಷ, ಪುರುಷ ವಿಶೇಷಾಂತರಗಳಲ್ಲಿ ಅಪಥ್ಯವಾಗಹುದು. ಹಾಗೂ ಅಪಥ್ಯವೆಂದು ಸಾಮಾನ್ಯತಃ ಪರಿಗಣಿಸಲ್ಪಟ್ಟವೂ ಕೆಲವು ಅವಸ್ಥಾಂತರಗಳಲ್ಲಿ ಪಥ್ಯವಾಗಬಹುದು. ಉದಾ : ಸಾಮಾನ್ಯವಾಗಿ ಪಥ್ಯವೆಂದು ಪರಿಗೃಹೀತವಾದ ಹಾಲು ಕೆಲವರಿಗೆ, ಕೆಲವು ಅವಸ್ಥೆಗಳಲ್ಲಿ ಅಹಿತವನ್ನುಂಟುಮಾಡಿದೆ ಹಾಗೂ ಅಪಥ್ಯವೆಂದು ಪ್ರಸಿದ್ಧವಾದ ವಿಷವೂ ಮಾತ್ರದಿಭೇದದಿಂದ ಪಥ್ಯವಾಗಿದೆ. ಪಥ್ಯವೆಂದು ಗೃಹೀತವಾದ ತುಪ್ಪ ಪ್ರಮಾಣ ಮೀರಿ ಸೇವಿಸಿದಾಗ ಹಾಗೂ ಕಫಕಾಲದ ವಸಂತದಲ್ಲಿ ಅಂತೆಯೇ ಆನೂಪ ಪ್ರದೇಶದಲ್ಲಿ (ಮಲೆನಾಡು), ಅತಿಸ್ಥೌಲ್ಯದಲ್ಲಿ, ಕಫಾಧಿಕ್ಯದಲ್ಲಿ ಅಪಥ್ಯವಾಗುತ್ತದೆ. ಕಾರಣ, ಪಥ್ಯಾಪಥ್ಯವನ್ನು ವೈದ್ಯರ ಸಲಹೆಯ ಮೇಲೆ ನಿಗದಿಮಾಡಿಕೊಳ್ಳುವುದು ಯಾವಾಗಲೂ ಒಳ್ಳೆಯದು. ಸಂಸ್ಕøತ ಸಾಹಿತ್ಯದಲದಲಿ ಪಥ್ಯೇ ಸತಿ ಗದಾರ್ತಸ್ಯ ಕಿಮೌಷಧ ನಿಷೇವಣೈ ಃ | ಪಥ್ಯೇ ಸತಿ s ಗದಾರ್ತಸ್ಯ ಕಿಮೌಷಧ ನಿಷೇವಣೈಃ || ಎಂಬ ಒಂದು ಸುಭಾಷಿತವುಂಟು. ಅದಕ್ಕೆ ಅರ್ಥ ಪಥ್ಯದಿಂದಿದ್ದರೆ ಔಷಧದಿಂದ ಏನು ಪ್ರಯೋಜನ ? ಪಥ್ಯವಿಲ್ಲದಿದ್ದರೆ ಔಷಧ ಸೇವಿಸಿಯಾದರೂ ಏನು ಲಾಭ ?- ಎಂದು. ಕಾಶ್ಯಪ ಸಂಹಿತೆಯಲ್ಲಿ-ಆಹಾರಕ್ಕಿಂತ ರೋಗ ನಿವಾರಣೋಪಾಯ ಇನ್ನೊಂದಿಲ್ಲ ಎಂದಿದೆ. ಅಂದರೆ ನಾವು ನಿತ್ಯೋಪಯೋಗದ ಆಹಾರವಸ್ತುಗಳಿಂದಲೇ ಎಷ್ಟೊ ರೋಗಗಳನ್ನು ನಿವಾರಿಸಿಕೊಳ್ಳಬಹುದು. ಔಷಧ ಸೇವಿಸಿದರೂ ಆಹಾ ಸರಿಯಾಗಿಲ್ಲದಿದ್ದರೆ, ಅದು ವ್ಯರ್ಥವಾಗುತ್ತದೆ ಎಂಬುದೇ ಇದರ ಅಭಿಪ್ರಾಯ. ಸಾಮಾನ್ಯವಾಗಿ ಆಯುರ್ವೇದ ಔಷಧಗಳು ಆಹಾರದಂತೆಯೇ ಇವೆ. ಕೇವಲ ದ್ರವ್ಯಗಳಿಂದಲೇ ಚಿಕಿತ್ಸೆ ಮಾಡಿಕೊಳ್ಳಬೇಕು ಎಂಬುದು ಆಯುರ್ವೇದದ ಅಭಿಪ್ರಾಯವಲ್ಲ. ಕೇವಲ ಉಪಚಾರಾದಿ ವ್ಯವಹಾರಗಳಿಂದ ರೋಗ ಕಡಿಮೆ ಮಾಡಿಕೊಂಡರೆ ಅದೂ ಪಥ್ಯವೇ. ಹಾಗೆಯೆ ಉಪಚಾರ ಸರಿಯಾಗಿಲ್ಲದೇ ಸಿಕ್ಕಾಪಟ್ಟೆ ವ್ಯವಹಾರದಿಂದ (ಅವ್ಯವಹಾರ) ರೋಗ ಹೆಚ್ಚಾದರೆ ಅದೂ ಅಪಥ್ಯವೇ. ಪಥ್ಯವೆಂದರೆ ಹಿತ, ಅಪಥ್ಯವೆಂದರೆ ಅಹಿತ ಎಂಬುದೇ ಮತಿತಾರ್ಥ. ಆದರೂ ಆಹಾರ ಪದಾರ್ಥಗಳಿಗೆ ಅದರಲ್ಲೂ ವಿಶೇಷತಃ ರೋಗಿ ಉಪಯೋಗಿಸುವ ಆಹಾರ ದ್ರವ್ಯಕ್ಕೆ ಪಥ್ಯವೆಂಬ ಶಬ್ದ ರೂಢಿಗೆ ಬಂದಿದೆ. ಆಯುರ್ವೇದದ ಔಷಧದ್ರವ್ಯಗಳು ಬಹಳಷ್ಟು ಆಹಾರದ್ರವ್ಯಗಳೇ ಆಗಿವೆ. ಈ ದೃಷ್ಟಿಯಿಂದ, ಕಾಶ್ಯಪಸಂಹಿತಾಕಾರ ಆಹಾರದಿಂದಲೇ ಚಿಕಿತ್ಸೆ ನಡೆಸಬಹುದು ಎಂದು ಹೇಳಿರುವುದು ಸರಿ.

	ಕೆಲವು ದ್ರವ್ಯ ಹಾಗೂ ಭಾವಗಳ ದೃಷ್ಟಿಯಿಂದ ಶ್ರೇಷ್ಠವೆಂದು ಆಯುರ್ವೇದದ ಪ್ರಸಿದ್ಧ ಗ್ರ್ರಂಥವಾದ ಚರಕಸಂಹಿತೆಯಲ್ಲಿ ಹೇಳಿರುವ ಪಥ್ಯಾಪಥ್ಯಗಳು ಹೀಗಿವೆ :

	ಜೀವ ನಿರ್ವಹಣೆಗೆ-ಆಹಾರವೇ ಶ್ರೇಷ್ಠ ; ಆಶ್ವಾಸನಕ್ಕೆ-ನೀರು (ಬಳಲಿದವನಿಗೆ ನೀರೇ ಅಮೃತ) ; ಜೀವನೀಯ ದ್ರವ್ಯಗಳಲ್ಲಿ ಹಾಲು ; ಬೃಂಹಣ ಪದಾರ್ಥಗಳಲ್ಲಿ ಮಾಂಸ ; ತೃಪ್ತಿಕಾರಕ-ಮಾಂಸರಸ; ಬಲವೃದ್ಧಿಗೆ-ಕುಕ್ಕುಟಮಾಂಸ (ಕೋಳಿ) ; ವೀರ್ಯವರ್ಧಕ-ನಕ್ರ ಶುಕ್ರ (ಮೊಸಳೆಯ ವೀರ್ಯ) ಕಫಪಿತ್ತಶಾಮಕ-ಮಧು (ಜೇನು) ; ವಾತಪಿತ್ತ ಶಾಮಕ-ಘೃತ ; ವಾತಕಫಶಾಮಕ-ತೈಲ (ಎಳ್ಳೆಣ್ಣೆ) ; ಫಕಹರ-ವಮನ ; ಪಿತ್ತಹರ-ವಿರೇಚನ (ಭೇದಿಗೆ ಔಷಧ ಕೊಡುವುದು ; ವಾತನಾಶಕ ಬಸ್ತಿ ; ಶರೀರಿ ಮೃದುತ್ವಕರ-ಸ್ವೇದ (ಬೆವರು ತರಿಸುವುದು) ; ಶರೀರ ದೃಢತಾ ಉತ್ಪಾದಕ-ವ್ಯಾಯಾಮ ; ಪುಂಸತ್ವನಾಶಕ (ನಪುಂಸಕತ್ವಜನಕ-ಕ್ಷಾರ ; (ಅನ್ನರುಚಿಕರ-ತಿಂದುಕ) ಶೋಷ (ಶುಷ್ಠತಾ) ನಾಶಕ-ಸ್ತನ್ಯ (ಹಾಲು) ; ಸಾತ್ಮ್ಯ-ದೋಷನಾಶಕ ; ರಕ್ತಸ್ತಂಭಕ ರಕ್ತಪಿತ್ತಶಾಮಕ-ಅಜಕ್ಷೀರ (ಆಡಿನ ಹಾಲು) ; ನಿದ್ರಾಕರ-ಮಹಿಷೀಕ್ಷೀರ (ಎಮ್ಮೆಹಾಲು) ; ಕೃಶತಾನಜನಕ-ಗವೇಧುಕ ; ರೂಕ್ಷತ್ವಜನಕ-ಉದ್ದಾಲಕ (ಕೋದ್ರವ) ; ಮೂತ್ರೋತ್ಪಾದಕ-ಇಕ್ಷು(ಕಬ್ಬು) ; ಪುರೀಷ (ಮಲ) ಉತ್ಪಾದಕ- ಯವ (ಜವೆಗೋದಿ) ; ವಮನ, ಆಸ್ಥಾಪನ, ಅನುವಾಸನೋಪಯೋಗಿ-ಮದನಫಲ ; ಸುಖವಿರೇಚಕ-ತ್ರವೃತ್(ನಿಶೋತ್ತರ) ; ಮೃದುವಿರೇಚಕ-ಆರಗ್ವಧ (ಕಕ್ಕೇಕಾಯಿ) ; ತೀಕ್ಷ್ಣವಿರೇಚಕ-ಸ್ನುಹೀ (ಕಳ್ಳಿ ಕ್ಷೀರ ;) ಶಿರೋವಿರೇಚಕ-ಅಪಾಮಾರ್ಗ ; ಕ್ರಮಿ ನಾಶಕ-ವಿಡಂಗ ; ವಿಷನಾಷಕ-ಶಿರೀಷ ; ಕುಷ್ಠನಾಶಕ-ಖದಿರ ; ವಾತನಾಶಕ-ರಾಸ್ನಾವಯಃಸ್ಥಾಪಕ(ಸ್ಥಿರಕರ)-ಆಮಲಕೀ (ನೆಲ್ಲಿಕಾಯಿ) ; ಪಥ್ಯ-ಹರೀತಕಿ(ಅಳಲೇಕಾಯಿ); ದೀಪÀನ, ಪಾಚನ, ಅನಾಹ (ಹೊಟ್ಟೆಯುಬ್ಬರ) ಶಾಮಕ-ಪಿಪ್ಪಲೀಮೂಲ ; ದೀಪನೀಯ, ಪಾಚನೀಯ ಗುದಶೋಧ-ನಾಶಕ ಅರ್ಶೋಹರ (ಮೂಲವ್ಯಾಧಿ-ರಕ್ತ ಬೀಳದಿರುವ ಮೊಳಕೆಯಲ್ಲಿ ಮಾತ್ರ) ಚಿತ್ರಮೂಲ (ಚಿತ್ರಕ); ಹಿಕ್ಕಾ (ಬಿಕ್ಕಳಿಕೆ) ಶ್ವಾಸಕಾಸ ಪಾಶ್ರ್ವಶೂಲನಾಶಕ-ಪುಷ್ಕರಮೂಲ ; ಸಂಗ್ರಾಹಕ, ದೀಪನೀಯ, ಪಾಚನೀಯ-ಮುಸ್ತಾ (ಜೇಕಿನ ಗಡ್ಡೆ ಅಥವಾ ಕೊನ್ನಾರಿ ಗಡ್ಡೆ) ; ದೀಪನ ಪಾಚನ, ವಮನ ಅತಿಸಾರಶಾಮಕ-ಉದೀಚ್ಯ (ಬಾಳದ ಬೇರು ಅಥವಾ ಮುಡಿವಾಳ ಬೇರು); ಸಂಹ್ರಾಹಕ, ದೀಪಕಪಾಚಕ-ಕಟ್ಟಂಗ (ಶ್ಯೋನಾಕ); ಸಂಗ್ರಾಹಕ ರಕ್ತಪಿತ್ತಶಾಮಕ-ಅನಂತಾ (ಸೊಗದೆ ಬೇರು); ಸಂಹ್ರಾಹಕ, ವಾತಹರ, ದೀಪನೀಯ ಕಫರಕ್ತವಿಕಾರ ವಿಬಂಧಕ-ಗುಡೂಚೀ (ಅಮೃತಬಳ್ಳಿ); ಸಂಗ್ರಾಹಕ ದೀಪಕ ವಾತಕಫನಾಶಕ-ಬಿಲ್ವ; ರಕ್ತಸಂಗ್ರಾಹಕ-ಕಾಶ್ಮರೀ (ಶಿವನ್ನಿ)ವೃಷ್ಯಪ್ರಶ್ನಿಪರ್ಣೀ ; ಸಂಗ್ರಾಹಕ ಸರ್ವದೋಷ ನಾಶಕ-ಅತಿವಿಷಾ (ಅತಿಬಜೆ) ; ಸಂಗ್ರಾಹಕ, ರಕ್ತಪಿತ್ತಶಾಮಕ-ನೀಲೋತ್ಪಲ, ಕುಮುದ ಪದ್ಮಕೇಶರ (ಕಿಂಜಲ್ಕ); ವೃಷ್ಯ, ತ್ರಿದೋಷಹರ ಶಾಲಿಪರ್ಣೀ ; ಸಂಗ್ರಾಹಕ ಬಲ್ಯ, ವಾತಹರ-ಬಲಾ (ಕಳ್ಳಂಗಡ್ಲೆ); ಮೂತ್ರಕೃಚ್ಛ (ಕಷ್ಟ) ನಾಶಕ, ವಾತಹರ-ಗೋಕ್ಷುರ (ನೇಗಿಲಮುಳ್ಳು); ಅನುಲೋಮಕ, ವಾತಕಫನಾಶಕ-ಹಿಂಗು ; ಭೇದನ, ದೀಪನ, ಅನುಲೋಮನ ವಾತಕಫನಾಶಕ-ಕಕ್ಕೇಕಾಯಿ (ಆರಗ್ವಧ); ಸ್ರಂಸನ (ಮಲವಿಸರ್ಜಕ), ಪಾಚನ, ಅರ್ಶೋಹರ-ಯವಕ್ಷಾರ ; ಗ್ರಹಣೀ ಶೋಧ ಅರ್ಶ, ಅಧಿಕ ಘೃತಸೇವನ ವಿಕಾರಶಾಮಕ-ತಕ್ರ (ಮಜ್ಜಿಗೆ) ಗ್ರಹಣೀದೋಷ, ಅರ್ಶೋನಾಶಕ ಅಮಾಂಸಭಕ್ಷಕ ಪ್ರಾಣಿ ಮಾಂಸಾಧಿಕ ಸೇವನ; ರಸಾಯನ (ಸರ್ವಧಾತುವರ್ಧಕ)-ಕ್ಷೀರಘೃತ ಸೇವನ; ಉದಾವರ್ತಹರ, ವೃಷ್ಯ-ಘತಸತ್ತು (ಅರಳು ಹಿಟ್ಟು) ; ದಂತದೃಢಕರ, ರುಚಿವರ್ಧಕ-ತೈಲಗಂಡೂಷ (ಮುಖದೊಳಗೆ ಎಳ್ಳೆಣ್ಣೆ ತುಂಬಿಟ್ಟು ಕೊಳ್ಳವುದು) ; ದುರ್ಗಂಧನಾಶಕ, ದಾಹಶಾಮಕ ಲೇಪಕ್ಕೆ-ಚಂದನ (ಗಂಧ); ಶೀತನಾಶಕಲೇಪ-ರಾಸ್ನಾ. ಅಗರು; ದಾಹ, ಚರ್ಮರೋಗನಾಶಕ, ಅಧಿಕಸ್ವೇದನಾಶಕ-ಲಾಮಂಚಕ (ಉಶೀರ) ; ವಾತಹರ, ಅಭ್ಯಂಗ, ಉಪನಾಹೋಪಯೋಗಿ (ಪೋಲ್ಟೀಸ್)-ಕುಷ್ಠ (ಚಂಗಲಕೋಷ್ಠ) ಚಕ್ಷುಷ್ಯ (ಕಣ್ಣಿಗೆ ಹಿತ) ವೃಷ್ಯ, ಕೇಶ್ಯ, ಕಂಠ್ಯ ವಣ್ರ್ಯ ವಿರಜನೀಯ ರೋಪಣೀಯ-ಮಧುಕ (ಯಷ್ಟಿಮಧು-ಅತಿಮಧುರ) ; ಪ್ರಾಣ ಸಂಜ್ಞಾಪ್ರದಾನ ಕಾರಣ-ವಾಯು ; ಆಮಸ್ತಂಭ ಶೀತ ಶೂಲ, ಉದ್ವೇಪನ (ಕಂಪ) ಪ್ರಶಮನ_ಅಗ್ನಿ ; ಕಫಪಿತ್ತಹರ, ರಕ್ತಸಂಗ್ರಾಹಕ-ಕುಟಜ ; ಸ್ತಂಭನ-ಜಲ, ಕಫಶಾಮಕ-ದುರಾಲಭಾ ; ರಕ್ತಪಿತ್ತವೃದ್ಧಿಶಾಮಕ-ಪ್ರಿಯಂಗು ; ತೃಷ್ಟಾ (ಬಾಯಾರಿಕೆ), ವರ್ಧಿ (ವಾಂತಿ) ಅತಿಯೋಗ ಪ್ರಶಮನಕ್ಕೆ ಮಣ್ಣು ಹೆಂಟೆ ಬಿಸಿಮಾಡಿ, ನೀರಿನಲ್ಲಿ ಹಾಕಿ ಸೋಸಿದ ನೀರು ಕುಡಿಯುವುದು ಅಥವಾ ಸುವಣಾರಜತಾದಿಗಳನ್ನು ಕಾಸಿ,ನೀರಿನಲ್ಲಿ ಹಾಕಿ ಆರಿಸಿದ ನೀರು ಕುಡಿಯುವುದು. ಅಗ್ನಿದೀಪ್ತಗೆ-ಅಗ್ನಿ ಶಕ್ತಿಗನುಸಾರ ಆಹಾರಗ್ರಹಣ ; ಎಲ್ಲ ಸೇವನೆಗಳಲ್ಲಿ ಶಕ್ತ್ಯನುಸಾರ ಆಹಾರ ವ್ಯವಹಾರ ; ಆರೋಗ್ಯಕ್ಕೆ-ಸಕಾಲಭೋಜನ; ಆಹಾರಗುಣ-ತೃಪ್ತಿ ; ಮನಃಪ್ರಸನ್ನಕರ, ಶ್ರಮಹರ-ಮದ್ಯ (ಪ್ರಮಾಣ ಮೀರದಂತೆ ಸೇವಿಸಬೇಕು. ಪ್ರಮಾಣ ಮೀರಿದರೆ ಸ್ಮøತಿನಾಶ) ;ಸುಖಪಾಚಕ-ಏಕಭೋಜನ ; ಕೃಶತಾಉತ್ಪಾದಕ-ಅತ್ಯಲ್ಪ ಭೋಜನ. ಶರೀರಮಾನಸಹಿತಕರ-ಶಾಂತಿ ; ವೃಷ್ಯ (ಮೈಥುನ ಶಕ್ತಿವರ್ಧಕ)-ಸಂಕಲ್ಪ ; ಆಯುಷ್ಯವರ್ಧಕ-ಬ್ರಹ್ಮಚರ್ಯಲ, ಶ್ರಮಹರ-ಸ್ನಾನ, ಪುಷ್ಟಿಕರ-ಮನಃಶಾಂತಿ ; ಶರೀರಪುಷ್ಟಿ-ನಿದ್ರಾಕರ ; ಬಲಕಾರಕ-ಸರ್ವರಸಾಭ್ಯಾಸ (ಷಡ್ರಸ) ; ಮೃದು ಔಷಧ ಯೋಗ್ಯ-ಬಾಲಕ ; ಗರ್ಭಧಾರಣ ಕಾರಣ-ಪ್ರಸನ್ನತೆ ; ಅಮಶಸ್ತ್ರ-ಜಾತಾಕಾ (ಜಿಗಳೆ-ಜಿಗಣೆ) ; ಸಾಧನೀಯ-ಬಸ್ತಿ ; ಔಷಧ ಭೂಮಿ-ಹಿಮಾಲಯ, ಔಷಧಗಳಲ್ಲಿ-ಸೋಮ ; ಆರೋಗ್ಯಕರ ಭೂಮಿ-ಮರುಪ್ರದೇಶ(ವಿಶೇಷತಃ ಬಯಲು) ; ರೋಗಿಗುಣ-ವೈದ್ಯ ಹೇಳಿದಂತೆ ನಡೆಯುವುದು ; ಆರೋಗ್ಯಲಕ್ಷಣ ಚಿಂತಾರಹಿತತ್ವ, ಸಂಶಯನಿವಾರಕ-ವೈದ್ಯಸಮೂಹ ; ವೈದ್ಯಗುಣ-ಕರ್ಮನಿಪುಣತೆ ; ಔಷಧಿ-ವಿಜ್ಞಾನ (ವಿಶೇಷ ಜ್ಞಾನ) ; ವಿಷಯ ಸ್ಢಿರಕಾರಕ-ಶಾಸ್ತ್ರಯುಕ್ತ ತರ್ಕ ಕಾಲಜ್ಞಾನ ಪ್ರಯೋಜಕ-ಕರಣೀಯ ಕರ್ಮಾನುಷ್ಠಾನ, ಬುದ್ಧಿವರ್ಧಕ-ವಿಶೇಷಜ್ಞರೊಂದಿಗೆ ವಿಚಾರ ವಿಮರ್ಶ ; ವಿದ್ಯಾಪ್ರಾಪ್ತಿಗೆ-ಆಚಾರ್ಯ ; ಅಮೃತಕ್ಕೆ (ಜೀವನದಾನ)-ಆಯುರ್ವೇದ ; ಅನುಷ್ಠೀಯ-ಸದ್ವಚನ-ಸುಖಕರ-ಸರ್ವಸಂನ್ಯಾಸ(ಫಲಾಪೇಕ್ಷಾತ್ಯಾಗ).

	ಕಂಠಕ್ಕೆ ಅಹಿತಕರ-ಬಾರಿಕಪತ್ಥ (ಎಳೆಯ ಬೆಳವಲ ಅಥವಾ ಬೇಲದಕಾಯಿ) ; ಹೃದಯ ಅಹಿತಕರ-ಕುರಿಯ ತುಪ್ಪ ; ಅಭಿಷ್ಯಂದಿ-ನೆರವಾಗದ ಮೊಸಲು (ಮಂದಕ) ; ವಾತೋತ್ಪಾದಕ-ಜಂಬೂ (ನೇರಳೆ) ; ಕಫಪಿತ್ತೋತ್ಪಾದಕ-ಚಕ್ಕಲಿ ; ಆಮ್ಲಪಿತ್ತಕಾರಕ-ಕುಲತ್ಥ (ಹುರಳಿ) ;ಕಫಪಿತ್ತಕರ-ಮಾಷ (ಉದ್ದು) ; ಆಮದೋಷಕಾರಕ-ಅಹಿತಭೋಜನ ; ರೋಗೋತ್ಪಾದನಕಾರಣ-ಮಲಸಂಗ್ರಹಣ ; ಅಪಚನಕಾರಕ-ಗುರುಭೋಜನ(ಜಡಪದಾರ್ಥ) ; ಶೋಷಕಾರಕ-ಅತಿಮೈಥುನ ; ನಪುಂಸಕತಾ ಉತ್ಪಾದಕ-ವೀರ್ಯವೇಗಧಾರಣ ; ಆಹಾರ ಅಶ್ರದ್ಧಾಕಾರಾಕ-ವಧಸ್ಥಾನ ; ಗ್ರಹಣೀದೂಷಕ- ಅಜೀರ್ಣ ; ವಿಷಮಾಗ್ನಿಕಾರಕ-ವಿಷಮಭೋಜನ (ಅನಿಯಮಿತ) ; ನಿಂದಿತ ರೋಗೋತ್ಪಾದಕ-ವಿದುದ್ಧಭೋಜನ ; ಅಹಿತಕರ-ಅಧಿಕಪರಿಶ್ರಮ ; ಕಾಲಬುದ್ಧಿ ಇಂದ್ರಿಯ ಮಿಥ್ಯಾಯೋಗ ವ್ಯಾಧಿಕಾರಣ ; ರಜಸ್ವಲಾಗಮನ-ಅಲಕ್ಷ್ಮೀಕಾರಕ ; ಅನಾಯುಷ್ಯ (ಆಯುಷ್ಯಹಾನಿಕರ)-ಪರಸ್ತ್ರೀಗಮನ ; ಅವೃಷ್ಯ-ಮನೋವಿಕೃತಿ ; ಜೀವನ ಶಕ್ತಿಹರ-ಅಧಿಕ ಪರಿಶ್ರಮ ; ರೋಗವರ್ಧನ-ವಿಷಾದ ; ಶರೀರಶೋಷಕ-ಚಿಂತಾ ; ಏಕರಸಸೇವನ ; ವರ್ಜನೀಯ-ಅಜೀರ್ಣ ; ಯಾಪನೀಯ (ಔಷಧ ಸೇವಿಸಿದಾಗ ಮಾತ್ರ ರೋಗ ಕಡಿಮೆಯಾಗಬಹುದು)-ವೃದ್ಧರ ರೋಗ ; ಕಷ್ಟಸಾಧ್ಯರೋಗ-ಸನ್ನಿಪಾತ ; ಆಮದೋಷ ಕೆಟ್ಟರೋಗ-ಜ್ವರ ; ರೋಗಸಮೂಹ-P್ಪ್ಷಯ (ರಾಜಯಕ್ಷ್ಮಾ) ; ಚಿರಕಾಲೀನ ರೊU-ಕುಷ್ಠ ; ನಿತ್ಯರೋಗ-ಪ್ರಮೇಹ ; ಚಿಕಿತ್ಸಾವಜ್ರ್ಯ-ನಾಸ್ತಿಕ (ಚಿಕಿತ್ಸೆಯಲ್ಲಿ ಶ್ರದ್ಧೆಯಿರದವ) ; ಕಷ್ಟಕಾರಕ-ಅತ್ಯಾಶೆ ; ಅರಿಷ್ಟ-ವೈದ್ಯವಚನ ಪಾಲಿಸದಿರುವುದು ; ಕಾಲಯಾಪನ-ಅವ್ಯವಸಾಯ (ಏನೂ ಮಾಡದಿರುವುದು) ; ಭಯೋತ್ಪಾದಕ ಅಸಾಮಥ್ರ್ಯ ; ಅಹಿತಕರ ಕರ್ಮ-ಅಸದ್ಗ್ರಹಣ (ದುಷ್ಟರಿಂದ ಸ್ವೀಕರಿಸುವುದು.)

	ಪಥ್ಯವೆನಿಸಿದ ಕೆಲವು ಆಹಾರದ್ರವ್ಯಗಳು : ಶೂಕಧಾನ್ಯಗಳಲ್ಲಿ-ರಕ್ತಶಾಲಿ (ಕೆಂಪಕ್ಕಿ), ಶಮೀಧಾನ್ಯಗಳಲ್ಲಿ ಮುದ್ಗ (ಹೆಸರು), ಜಲ-ಅಂತರಿಕ್ಷ (ನೆಲಕ್ಕೆ ತಾಗುವ ಮೊದಲೇ ಮೇಲಿನಿಂದ ಹಿಡಿದ ನೀರು), ಲವಣವರ್ಗದಲ್ಲಿ-ಸೈಂಧವ, ಶಾಕಗಳಲ್ಲಿ ಜೀವಂತಿ, ಮೃಗಮಾಂಸ-ಚಿಗರೆ, ಪಕ್ಷಿಗಳಲ್ಲಿ-ಲಾವಮಾಂಸ, ಬಿಲೇಶಯ ಮಾಂಸ-ಗೋಧಾ, ಮೀನುಗಳಲ್ಲಿ-ರೋಹಿತ, ಘೃತ-ಗೋಘೃತ, ಕ್ಷೀರ-ಗೋಕ್ಷೀರ, ಸ್ಥಾವರ ಸ್ನೇಹ-ತಿಲತೈಲ, ಆನೂಪಮೃಗ ಮೇದ-ಹಂದಿಯ ಕೊಬ್ಬು, ಪಕ್ಷಿವಸಾ-ಶ್ವೇತ ಹಂಸವಸಾ, ಕೋಳಿಯ ವಸಾ, ಪಶುವಸಾ, ಆಡಿನ ವಸಾ-ಇತ್ಯಾದಿ, ಕಂದ (ಗಡ್ಡೆ)- ಆದ್ರ್ರಕ (ಹಸೀಶುಂಠಿ), ಫಲ-ದ್ರಾಕ್ಷಾ ; ಇಕ್ಷುವಿಕಾರ-ಶರ್ಕರಾ-(ಸಕ್ಕರೆ).

	ಅಪಥ್ಯಗಳು : ಶೂಕಧಾನ್ಯ-ಯವ (ಜವೆಗೋದಿ), ಶಮೀಧಾನ್ಯ- ಮಾಷ, ಉದಕ-ಮಳೆಗಾಲದ ನದೀನೀರು, ಲವಣ-ಸೋರುಪ್ಪು, ಶಾಕ-ಸಾಸಿವೆ ಸೊಪ್ಪು, ಮಾಂಸ-ಗೋಮಾಂಸ, ಪಕ್ಷಿ-ಕಾಣಕಪೋತ (ಕಾಡುಪಾರಿವಾಲ), ಬಿಲೇಶಯ- ಮಂಡೂಕ (ಕಪ್ಪೆ), ಮೀನ-ಚಿಲೀಚಿಮ ಘೃತ-ಕುರಿಯ ತುಪ್ಪ, ಹಾಲು-ಕುರಿಯ ಹಾಲು, ಸ್ಥಾವರಸ್ನೇಹ-ಕುಸುಂಬ (ಕುಸಬಿ), ವಸಾ-ಎವ್ಮ್ಮೆಯ ವಸಾ, ಪಕ್ಷವಸಾ-ಚಟಕ (ಗುಬ್ಬಿ), ಮೇದಸ್ಸು-ಆನೆ, ಫಲ-ಕಾಡುಹಲಸು (ನಿಕುಚ), ಕಂದ-ಆಲುಕ (ಬಟಾಟೆ), ಇಕ್ಷುವಿಕಾರ-ಕಾಕಂಬಿ. 
(ಎನ್.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ